ಅನಟೋಲಿಯ
	ತುರ್ಕಿಯ ಮಧ್ಯಭಾಗದಲ್ಲಿರುವ ಪ್ರಸ್ಥಭೂಮಿ. ವಿಸ್ತೀರ್ಣ 2,87,117 ಚ.ಮೈ. ಜನಸಂಖ್ಯೆ ಸುಮಾರು 1,93,38,269. ಉತ್ತರದಲ್ಲಿ ಪಾಂಟಿಕ್ ಪರ್ವತವೂ ದಕ್ಷಿಣದಲ್ಲಿ ಟಾರಸ್ ಪರ್ವತವೂ ಇವೆ. ಈ ಪ್ರಸ್ಥಭೂಮಿ ಪೂರ್ವದಲ್ಲಿ ಎತ್ತರವಾಗುತ್ತ ಅರ್ಮೀನಿಯ ಪ್ರದೇಶವನ್ನು ಸೇರುವುದು; ಆದರೆ ಪಶ್ಚಿಮದಲ್ಲಿ ಇಕ್ಕಟ್ಟಾದ ಕರಾವಳಿ ಮೈದಾನವನ್ನು ತಲುಪುವುದು. ಸರಾಸರಿ ಎತ್ತರ 2500'. ತುರ್ಕಿಯ ರಾಜಧಾನಿ ಅಂಕಾರ ಪಟ್ಟಣ ಈ ಪ್ರಸ್ಥಭೂಮಿಯ ಮಧ್ಯಭಾಗದಲ್ಲಿದೆ.

	ಇದು ವಿಚಿತ್ರ ವಾಯುಗುಣವನ್ನು ಹೊಂದಿದೆ. ಚಳಿಗಾಲದಲ್ಲಿ ಅತಿಶೀತದಿಂದ ಕೂಡಿ ಕೆಲವು ಭಾಗಗಳು ಹಿಮಾಚ್ಛಾಧಿತವಾಗುತ್ತವೆ. ಬೇಸಗೆಯಲ್ಲಿ ಶಾಖದಿಂದ ಕೂಡಿದ ಶುಷ್ಕ ವಾತಾವರಣವಿರುತ್ತದೆ. ಮಳೆ ಕಡಿಮೆ. ಸ್ವಾಭಾವಿಕ ಸಸ್ಯವರ್ಗ ರಷ್ಯದ ಸ್ಟೆಪ್ಪಿ ಮಾದರಿಯದು. ಫಲವತ್ತಾದ ಹುಲ್ಲುಗಾವಲುಗಳಿವೆ. ಪಶುಪಾಲನೆ ಜನರ ಮುಖ್ಯ ಕಸುಬು. ಅನಟೋಲಿಯ ಅಂಗೋರ ಮೇಕೆಗಳಿಗೆ ಪ್ರಸಿದ್ಧವಾದುದು ಮಳೆ ಸಾಕಷ್ಟು ಬೀಳುವ ಪ್ರದೇಶಗಳಲ್ಲಿ ಬೇಸಾಯ ನಡೆಯುತ್ತದೆ. ಗೋದಿ ಮುಖ್ಯವಾದ ಬೆಳೆ. ದ್ರಾಕ್ಷಿ, ಸೇಬು ಮೊದಲಾದ ಹಣ್ಣುಗಳನ್ನೂ ಬೆಳೆಯುತ್ತಾರೆ; ಅಫೀಮನ್ನೂ ಉತ್ಪಾದಿಸುತ್ತಾರೆ.

	ಪ್ರಸ್ಥಭೂಮಿಯ ಉತ್ತರ ಸರಹದ್ದಿನ ಪರ್ವತಶ್ರೇಣಿಯಲ್ಲಿ ಕಲ್ಲಿದ್ದಲು ದೊರಕುವುದು. ಮಧ್ಯ ಅನಟೋಲಿಯದಲ್ಲಿ ಕಬ್ಬಿಣದ ಅದುರು ಸಿಗುವುದು. ಈ ಕಲ್ಲಿದ್ದಲು ಮತ್ತು ಕಬ್ಬಿಣದ ಅದುರನ್ನು ಕಾರಾಬುಕ್ ಉಕ್ಕಿನ ಕಾರ್ಖಾನೆ ಉಪಯೋಗಿಸುತ್ತದೆ. ತಾಮ್ರ, ಕ್ರೋಮೈಟ್, ಮ್ಯಾಂಗನೀಸ್ ಮತ್ತು ಪಾದರಸ ಇಲ್ಲಿ ಸಿಗುವ ಇತರ ಖನಿಜಗಳು.   ಸಕ್ಕರೆ ಮತ್ತು ಗಿರಣಿ ಮಿಲ್ಲುಗಳು ಇವೆ.											
(ಎಂ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ